ಕ್ಷಾಮ

ಯಾವುದೇ ಪದಾರ್ಥದ ತೀವ್ರ ಅಭಾವವನ್ನು ಆ ಪದಾರ್ಥದ ಕ್ಷಾಮವೆಂದು ಹೇಳುವ ವಾಡಿಕೆಯಿದೆಯಾದರೂ ಹೆಚ್ಚು ಸಂಖ್ಯೆಯ ಜನರು ಹಸಿವು-ಉಪವಾಸಗಳಿಗೆ ಒಳಗಾಗುವ ಮಟ್ಟಿಗೆ ಸಾರ್ವಜನಿಕವಾಗಿ ಸಂಭವಿಸುವ ಆಹಾರಾಭಾವವೇ ಕ್ಷಾಮ (ಫ್ಯಾಮಿನ್).

ಇತಿಹಾಸ: ಕ್ಷಾಮದ ಇತಿಹಾಸ ಬಲು ದೊಡ್ಡದು. ಪ್ರಾಚೀನ ಈಜಿಪ್ಟಿನಲ್ಲಿ ಫೇರೋಗಳ ಕಾಲದಲ್ಲಿ ಕ್ಷಾಮ ಸಂಭವಿಸಿದ್ದ ಬಗ್ಗೆ ಬೈಬಲಿನಲ್ಲಿ ಉಲ್ಲೇಖವಿದೆ. ಕ್ರಿ.ಪೂ.436ರಲ್ಲಿ ರೋಮಿನಲ್ಲಿ ಕ್ಷಾಮ ಸಂಭವಿಸಿದಾಗ ಹಸಿವನ್ನು ತಡೆಯಲಾರದೆ ಸಾವಿರಾರು ಮಂದಿ ಟೈಬರ್ ನದಿಯೊಳಕ್ಕೆ ಹಾರಿಕೊಂಡರೆಂದು ಹೇಳಲಾಗಿದೆ. ಕ್ರಿ.ಪೂ.42ರಲ್ಲಿ ಈಜಿಪ್ಟಿನಲ್ಲಿ ಸಂಭವಿಸಿದ ಕ್ಷಾಮವೂ ಭೀಕರವಾದ್ದು. ಅಲ್ಲಿ ಕ್ರಿ.ಶ.1064-72 ರಲ್ಲಿ ಹಬ್ಬಿದ ಕ್ಷಾಮ ಏಳು ವರ್ಷಗಳ ಬರವೆಂದು ಹೆಸರಾಗಿದೆ. ಇಂಗ್ಲೆಂಡೂ ಸೇರಿದಂತೆ ಯೂರೋಪಿನ ಇತಿಹಾಸದಲ್ಲೂ ಕ್ಷಾಮಗಳು ಅನೇಕ ಸಾರಿ ಸಂಭವಿಸಿದ ಬಗ್ಗೆ ದಾಖಲೆಗಳುಂಟು. 1005ರಲ್ಲಿ ಇಂಗ್ಲೆಂಡಿಗೆ ಬರ ಬಂದಿತ್ತು. ಹನ್ನೊಂದು ವರ್ಷಗಳ ಅನಂತರ (1016) ಇಡೀ ಯೂರೋಪಿನಲ್ಲಿ ಕ್ಷಾಮ ಸಂಭವಿಸಿತ್ತು. 1586ರಲ್ಲಿ ಇಂಗ್ಲೆಂಡಿನಲ್ಲಿ ಉಂಟಾದ ಕ್ಷಾಮದ ಫಲವಾಗಿ ಅಲ್ಲಿ ಬಡವರಿಗೆ ಸಾರ್ವಜನಿಕ ಪರಿಹಾರ ನೀಡುವ ಕಾನೂನು (ಪೂರ್ ಲಾ) ಜಾರಿಗೆ ಬಂತು. ಐರ್ಲೆಂಡಿನಲ್ಲಿ ಜನಸಾಮಾನ್ಯರ ಜೀವಾನಾಧಾರವಾದ ಆಲೂಗೆಡ್ಡೆಯ ಫಸಲಿಗೆ ಹಾನಿಯೊದಗಿ ಸಂಭವಿಸಿದ ಕ್ಷಾಮ (1846-47) ಆ ದೇಶದ ಇತಿಹಾಸದಲ್ಲಿ ಆಲೂಗೆಡ್ಡೆಯ ಕ್ಷಾಮವೆಂದೇ ಹೆಸರಾಗಿದೆ. ಅದರ ಪರಿಹಾರಕ್ಕಾಗಿ ಬ್ರಿಟಿಷ್ ಪಾರ್ಲಿಮೆಂಟು 1,00,00,000 ಪೌಂಡುಗಳಷ್ಟು ಪರಿಹಾರಧನವನ್ನು ಮಂಜೂರು ಮಾಡಿತ್ತು. 1877-78ರಲ್ಲೂ 1887-89ರಲ್ಲೂ ಮತ್ತೆ 1916ರಲ್ಲೂ ಚೀನದಲ್ಲಿ ಸಂಭವಿಸಿದ ಕ್ಷಾಮಗಳೂ ಬಹು ಭೀಕರವಾದವು. 1877-78ರ ಉತ್ತರ ಚೀನದ ಕ್ಷಾಮದಲ್ಲಿ 95,00,000 ಜನ ಸಾವಿಗೆ ಈಡಾದರೆಂದು ಹೇಳಲಾಗಿದೆ. ರಷ್ಯದಲ್ಲಿ 1891-92ರಲ್ಲೂ ಸೋವಿಯೆತ್ ದೇಶದಲ್ಲಿ 1921 ಮತ್ತು 1932-33ರಲ್ಲೂ ಕ್ಷಾಮಗಳು ಸಂಭವಿಸಿದ್ದುವು. ಅತ್ಯಂತ ಇತ್ತೀಚಿನ ಕ್ಷಾಮವೆಂದರೆ 1960-61ರಲ್ಲಿ ಕಾಂಗೋದಲ್ಲಿ ಸಂಭವಿಸಿದ್ದು. ವಿಶ್ವಸಂಸ್ಥೆಯ ತ್ವರಿತ ಪರಿಹಾರ ಕಾರ್ಯದಿಂದಾಗಿ ಇದರ ಅನಾಹುತ ತಪ್ಪಿತು.
ಭಾರತದ ಇತಿಹಾಸದಲ್ಲಿ ಹಲವಾರು ಕ್ಷಾಮಗಳ ಉಲ್ಲೇಖವಿದೆ. 1148-59 ರಲ್ಲಿ ಹನ್ನೊಂದು ವರ್ಷಗಳ ಕಾಲ ಉಗ್ರಕ್ಷಾಮವಿತ್ತು. 1344-45ರಲ್ಲಿ ಕ್ಷಾಮ ಉಂಟಾಗಿದ್ದಾಗ ಆಗಿನ ಮೊಗಲ್ ಚಕ್ರವರ್ತಿಗೆ ಕೂಡ ತನ್ನ ಅರಮನೆಗೆ ಅಗತ್ಯವಾದ ಸಾಮಗ್ರಿಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲವಂತೆ. ಮಹಾಕ್ಷಾಮವೆಂದು ಅದು ಹೆಸರಾಗಿದೆ. ಅನಂತರ 1396-1407ರಲ್ಲಿ 12 ವರ್ಷಗಳ ಕಾಲ ಏಕಪ್ರಕಾರವಾಗಿ ಮುಂದುವರಿದ ಕ್ಷಾಮಕ್ಕೆ ಲಕ್ಷಾಂತರ ಜನ ಬಲಿಯಾದರು. ಅದನ್ನು ದುರ್ಗಾದೇವಿ ಬರವೆಂದು ಜನ ಕರೆದಿದ್ದಾರೆ. 1661ರಲ್ಲಿ ಕ್ಷಾಮ ಸಂಭವಿಸಿತೆಂದು ಹೇಳಲಾಗಿದೆ. ಆಗ ಎರಡು ವರ್ಷಗಳ ಕಾಲ ಮಳೆಯೇ ಬೀಳಲಿಲ್ಲವಂತೆ. 1769-70ರಲ್ಲಿ ಬಂಗಾಳದಲ್ಲಿ ಸಂಭವಿಸಿದ ಮಹಾಕ್ಷಾಮಕ್ಕೆ ಒಂದು ಕೋಟಿ ಜನ ಬಲಿಯಾದರು. 1783ರಲ್ಲಿ ವಾರಾಣಸಿ ಪ್ರಾಂತ್ಯದ ಪೂರ್ವದ ತುದಿಯಿಂದ ಲಾಹೋರ್ ಮತ್ತು ಜಮ್ಮು ವರೆಗೆ ಬರ ಹಬ್ಬಿತ್ತು. ಹದಿನೆಂಟನೆಯ ಶತಮಾನದ ಕೊನೆಯ ದಶಕದಲ್ಲಿ (1790-92) ಸಂಭವಿಸಿದ ಕ್ಷಾಮ ತಲೆಬುರುಡೆಯ ಬರವೆಂದು ಹೆಸರಾಗಿದೆ. ಆಗ ಶವಸಂಸ್ಕಾರ ಮಾಡಲು ಕೂಡ ಅಸಾಧ್ಯವೆನಿಸುವಷ್ಟು ಸಂಖ್ಯೆಯಲ್ಲಿ ಜನ ಸತ್ತರು. ವಾಯವ್ಯ ಪ್ರಾಂತ್ಯದಲ್ಲಿ (ಈಗಿನ ಉತ್ತರ ಪ್ರದೇಶ) 8,00,000 ಮಂದಿ ಕ್ಷಾಮಕ್ಕೆ ಆಹುತಿಯಾದರು (1838). ಅನಂತರ ಸಂಭವಿಸಿದ ಕೆಲವು ಮುಖ್ಯ ಕ್ಷಾಮಗಳು ಇವು: ವಾಯವ್ಯ ಭಾರತದಲ್ಲಿ (1861); ಬಂಗಾಲ ಒರಿಸ್ಸಗಳಲ್ಲಿ (1866: ಸತ್ತವರು 10,00,000); ರಾಜಪುಟಾಣದಲ್ಲಿ (1869: ಸಾವುಗಳು 15,00,000); ಮುಂಬಯಿ, ಮದ್ರಾಸು, ಮೈಸೂರು ಪ್ರದೇಶಗಳಲ್ಲಿ (1876-78: ಮರಣಸಂಖ್ಯೆ 95,00,000) ಇಡೀ ಭಾರತದ ಅನೇಕ ಭಾಗಗಳಲ್ಲಿ (1897 ಮತ್ತು 1899ರಲ್ಲಿ ಕ್ಷಾಮದಲ್ಲಿ 10,00,000 ಮಂದಿ ಸತ್ತರು). ಎರಡನೆಯ ಮಹಾಯುದ್ಧ ಕಾಲದಲ್ಲಿ (1943) ಬಂಗಾಳದಲ್ಲಿ ಸಂಭವಿಸಿದ ಕ್ಷಾಮದಿಂದ ಕನಿಷ್ಠ 15,00,000 ಮಂದಿ ಸತ್ತಿರಬೇಕು. ಯುದ್ಧನಿರತ ಬ್ರಿಟಿಷ್ ಸರ್ಕಾರದ ಬೇಜವಾಬ್ದಾರಿ ನೀತಿಯಿಂದಾಗಿ ಈ ಕ್ಷಾಮ ತಲೆದೋರಿತೆಂಬುದು ಸಿದ್ಧವಾಗಿದೆ. ಅಲ್ಲಿ ಅಭಾವ ಪರಿಸ್ಥಿತಿ ತಲೆದೋರಿದ ಮೇಲೂ ಹಲವಾರು ವಾರಗಳ ಕಾಲ ಸರಬರಾಯಿಯ ಕಡೆಗೆ ಸರ್ಕಾರ ಗಮನ ಕೊಡಲಿಲ್ಲ. ಧಾನ್ಯ ಬೆಲೆಗಳು ವಿಪರೀತವಾಗಿ ಏರಿ, ಸಾಮಾನ್ಯರಿಗೆ ಆಹಾರ ಅಲಭ್ಯವಾಗಿ, ಲಕ್ಷಾಂತರ ಮಂದಿ ಹೊಟ್ಟೆಗಿಲ್ಲದೆ ಹಳ್ಳಿಗಳಿಂದ ಕಲ್ಕತ್ತಕ್ಕೆ ಸಾಗಿ ಬಂದು, ರಸ್ತೆಗಳ ಬದಿಗಳಲ್ಲಿ ಸಾಲುಸಾಲಾಗಿ ಸಾಯಲಾರಂಭಿಸಿದಾಗ ಸರ್ಕಾರ ಕಣ್ಣು ತೆರೆಯಿತು. ಆದರೆ ಆ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಕಾರಣಗಳು: ಕ್ಷಾಮಗಳಿಗೆ ಮುಖ್ಯವಾದ ಕಾರಣಗಳು ನಾಲ್ಕು: 

1 ನೀರಿನ ಅಭಾವದಿಂದ ವ್ಯಾಪಕವಾಗಿ ಫಸಲು ನಷ್ಟವಾಗಿ ಅಭಾವ ಸಂಭವಿಸುತ್ತದೆ. ಉಷ್ಣವಲಯದ ನಾಡುಗಳಲ್ಲಿ ಅನಾವೃಷ್ಟಿಯ ಪರಿಣಾಮ ಸಾಮಾನ್ಯವಾಗಿ ತೀವ್ರವಾದದ್ದು. ಈ ಪ್ರದೇಶಗಳಲ್ಲಿ ನೀರಿನ ಸಂಗ್ರಹ, ಹಾಳತವಾದ ಬಳಕೆ-ಇದಕ್ಕೆ ಹೆಚ್ಚಿನ ಪ್ರಾಧಾನ್ಯ. ಮಳೆಯನ್ನೇ ನೇರವಾಗಿ ಅವಲಂಬಿಸುವುದನ್ನು ನೀರಾವರಿಯಿಂದಾಗಿ ಭಾಗಶಃ ನಿವಾರಿಸಲಾಗಿದೆ. ಆದರೆ ಮಳೆ ಸಂಪೂರ್ಣವಾಗಿ ಬಾರದೆಯೇ ಹೋದಾಗ ಬೇಸಾಯಕ್ಕೆ ತೊಂದರೆಯಾಗುವುದು ಸಾಮಾನ್ಯ.

2 ಸಮಶೀತೋಷ್ಣ ವಲಯದ ನಾಡುಗಳಲ್ಲಿ ನೀರಿನ ಅಭಾವದಿಂದ ಕ್ಷಾಮ ಒದಗುವುದು ಬಹಳ ವಿರಳ. ಯುದ್ಧ, ದಂಗೆ, ಫಸಲಿನ ಲೂಟಿ ಇವು ಯೂರೋಪಿನಲ್ಲಿ ಸಂಭವಿಸಿದ ಕ್ಷಾಮಗಳಿಗೆ ಮುಖ್ಯ ಕಾರಣಗಳು. 16, 17ನೆಯ ಶತಮಾನಗಳಲ್ಲಿ ನಡೆದ ಮತೀಯ ಯುದ್ಧಗಳ ಫಲವಾಗಿ ಅಲ್ಲಿ ಕ್ಷಾಮಗಳು ಪದೇಪದೇ ಒದಗಿದುವು. 20ನೆಯ ಶತಮಾನದಲ್ಲಿ ಅತಿಯಾದ ಫಸಲು ನಷ್ಟವಾಗುವಂಥ ದೀರ್ಘ ಯುದ್ಧಗಳು ಜರುಗಿಲ್ಲ. ಕೈಗಾರಿಕಾ ಪ್ರದೇಶಗಳಲ್ಲಿ ಆಹಾರ ಸರಬರಾಯಿಗೆ ಸುಸೂತ್ರ ಸಾರಿಗೆ ವ್ಯವಸ್ಥೆ ಅತ್ಯಗತ್ಯ. ಇದಕ್ಕೆ ಅಡಚಣೆ ಒದಗಿದಾಗ ಕ್ಷಾಮ ತಲೆದೋರಿರುವುದುಂಟು. ಕೆಲವು ವೇಳೆಗಳಲ್ಲಿ ಒಂದು ಜನಾಂಗವನ್ನು ಅದರ ನೆಲೆಯಿಂದ ಕದಲಿಸಿ ಹೊರದೂಡಲು ಕೃತಕವಾಗಿ ಕ್ಷಾಮ ಪರಿಸ್ಥಿತಿಯನ್ನುಂಟುಮಾಡಿದ್ದುಂಟು. ಎರಡನೆಯ ಮಹಾಯುದ್ಧ ಪೂರ್ವದ ಜರ್ಮನಿಯ ನಾಟ್ಸಿಗಳು ಯೆಹೂದ್ಯರನ್ನು ಹೊರಗಟ್ಟಲು ಈ ಕ್ರಮ ಅನುಸರಿಸಿದ್ದರು.

3 ರೋಗಗಳಿಂದಲೂ ಕೀಟಗಳಿಂದಲೂ ಬೆಳೆಗೆ ಹಾನಿಯೊದಗಿದಾಗ ಕ್ಷಾಮ ಸಂಭವಿಸಬಹುದು. 19ನೆಯ ಶತಮಾನದಲ್ಲಿ ಐರ್ಲೆಂಡಿನಲ್ಲಿ ಆಲೂಗೆಡ್ಡೆಯ ಬೆಳೆಗೆ ವ್ಯಾಪಕವಾಗಿ ಬೂಷ್ಟು ರೋಗ ತಗಲಿ ಬೆಳೆ ಕೆಟ್ಟು ಕ್ಷಾಮ ಬಂದಿತ್ತು. ಈ ಕಾಲದಲ್ಲಿ 20-30 ಲಕ್ಷ ಮಂದಿ ಸತ್ತರು. ಅನೇಕರು ಅಮೆರಿಕಕ್ಕೆ ವಲಸೆ ಹೋದರು. ಎಲ್ಲೆಲ್ಲಿ ಜನರು ಒಂದೇ ಬೆಳೆಯನ್ನು ಹೆಚ್ಚಾಗಿ ಅವಲಂಬಿಸಿರುತ್ತಾರೋ ಅಲ್ಲೆಲ್ಲ ಈ ಬಗೆಯ ಕ್ಷಾಮದ ಅಪಾಯವುಂಟು. ಇಂಥೆಡೆಗಳಲ್ಲಿ ಸತತವಾದ ವೀಕ್ಷಣೆ ಮತ್ತು ನಿವಾರಣಾ ಕ್ರಮಗಳು ಅತ್ಯಗತ್ಯ.
4 ನೈಸರ್ಗಿಕ ಅನಾಹುತಗಳಿಂದಲೂ ಕ್ಷಾಮ ಉಂಟಾಗುತ್ತದೆ. ಭೂಕಂಪ, ಪ್ರವಾಹ-ಇವು ಎರಡು ಉದಾಹರಣೆಗಳು. ಇವುಗಳಿಂದ ಆಹಾರ ದಾಸ್ತಾನಿಗೆ ನಷ್ಟ ತಟ್ಟಬಹುದು. ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು.

ಪರಿಹಾರ: ಉಷ್ಣವಲಯದ ನಾಡುಗಳಲ್ಲಿ ನೀರಿನ ಸಂಗ್ರಹ ಮತ್ತು ವಿತರಣೆಯ ಸಂಯೋಜಿತ ವ್ಯವಸ್ಥೆಯಿಂದ ಕ್ಷಾಮವನ್ನು ಬಹಳ ಮಟ್ಟಿಗೆ ತಡೆಗಟ್ಟಲು ಸಾಧ್ಯ. ರಾಜಕೀಯ, ಆರ್ಥಿಕ ಸ್ಥಿರತೆಯಿಂದ ಮಾನವಕೃತ ಕ್ಷಾಮಗಳು ಸಂಭವಿಸದಂತೆ ನೋಡಿಕೊಳ್ಳಬಹುದು. ನೈಸರ್ಗಿಕ ಅನಾಹುತಗಳ ಮೇಲೆ ಮಾನವ ಇದುವರೆಗೂ ಹತೋಟಿ ಹೊಂದಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕ್ಷಾಮಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಅನುಭವ ಬಂದಿದೆ. ಭಾರತದ ಅನೇಕ ಕ್ಷಾಮಗಳು ಸ್ಥಳೀಯ. ಅಕ್ಕಪಕ್ಕದ ಪ್ರದೇಶಗಳಿಂದಲೂ ಹೊರದೇಶಗಳಿಂದಲೂ ಶೀಘ್ರವಾಗಿ ಆಹಾರಸಾಮಗ್ರಿ ತರಲು ಈಚೆಗೆ ಸಾರಿಗೆ ವ್ಯವಸ್ಥೆ ಸಹಾಯಕವಾಗಿದೆ. 19ನೆಯ ಶತಮಾನದ ನಡುಗಾಲದಲ್ಲಿ ರೈಲ್ವೆಯ ನಿರ್ಮಾಣವಾದಾಗ ಭಾರತದಲ್ಲಿ ಕ್ಷಾಮದ ತೀವ್ರತೆ ಬಹುವಾಗಿ ತಗ್ಗಿತು. ಕ್ಷಾಮ ಪ್ರದೇಶದಲ್ಲಿ ವ್ಯಾಪಕವಾಗಿ ಕಾಮಗಾರಿ ಕಾರ್ಯಗಳನ್ನು ಜಾರಿಗೆ ತಂದು ಮತ್ತು ಇತರ ವಿಧಾನಗಳಿಂದ ಜನರಲ್ಲಿ ಹಣ ಹಂಚಿ, ಅದರಿಂದ ಅವರು ಆಹಾರ ಕೊಳ್ಳಲು ಸಾಧ್ಯವಾಗುವಂತೆ ಧಾನ್ಯ ಸರಬರಾಯಿಯ ಕ್ರಮ ಕೈಗೊಂಡು ಅಭಾವ ಪರಿಸ್ಥಿತಿಯನ್ನು ನಿವಾರಿಸಲು ಸಾಧ್ಯವಾಗಿದೆ. ಈಗಲೂ ಭಾರತದಲ್ಲಿ ಆಗಿಂದಾಗ್ಗೆ ಕ್ಷಾಮ ಪರಿಸ್ಥಿತಿ ಉದ್ಭವಿಸುವುದಾದರೂ ಉಪವಾಸದಿಂದ ಜನ ಸಾಯುವುದು ಅಪರೂಪ.

ಎರಡನೆಯ ಮಹಾಯುದ್ಧದ ಪರಿಣಾಮವಾಗಿ ಸಂಭವಿಸಬಹುದಾಗಿದ್ದ ಕ್ಷಾಮವನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವಸಂಸ್ಥೆಯ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಸ್ಥಾಪಿತವಾಗಿತ್ತು. ಯುದ್ಧದಿಂದ ಹಾನಿಗೆ ಈಡಾದ ದೇಶಗಳಿಗೆ ಇದು ತ್ವರೆಯಾಗಿ ನೆರವು ಒದಗಿಸಿತು. ಕ್ಷಾಮ ತಲೆದೋರದಂಥ ಸುವ್ಯವಸ್ಥೆಯ ಸ್ಥಾಪನೆಗಾಗಿ ಆಹಾರ ಮತ್ತು ಕೃಷಿ ಸಂಸ್ಥೆ ದುಡಿಯುತ್ತಿದೆ. ಕಾಂಗೋದ ಅಂತರ್ಯುದ್ಧದಿಂದಾಗಿ 1960ರಲ್ಲಿ ಕ್ಷಾಮ ಪರಿಸ್ಥಿತಿ ತಲೆದೋರಿತ್ತು. ಆಗ ವಿಶ್ವಸಂಸ್ಥೆ ಸಕಾಲದಲ್ಲಿ ನಿರಾಶ್ರಿತರಿಗೆ ಪರಿಹಾರ ದೊರಕಿಸಿಕೊಟ್ಟಿತು. 1971ರಲ್ಲಿ ಬಾಂಗ್ಲಾದೇಶದ ಮೇಲೆ ಪಾಕಿಸ್ತಾನ್ ಸರ್ಕಾರ ನಡೆಸಿದ ದೌರ್ಜನ್ಯದಿಂದಾಗಿ ಸುಮಾರು ಒಂದು ಕೋಟಿ ನಿರಾಶ್ರಿತರು ಭಾರತಕ್ಕೆ ಬಂದರು. ಬಾಂಗ್ಲಾದೇಶದಲ್ಲೂ ಅಭಾವ ಪರಿಸ್ಥಿತಿ ಏರ್ಪಟ್ಟಿತು. ಭಾರತ ಸರ್ಕಾರದ ಅಕಾಲಿಕ ಕ್ರಮದಿಂದಾಗಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತ ಪರಿಹಾರ ಕಾರ್ಯದಿಂದಾಗಿ ಪರಿಸ್ಥಿತಿ ತೀರ ಹದಗೆಡದಂತೆ ತಡೆಯುವುದು ಸಾಧ್ಯವಾಯಿತು.
ಕ್ಷಾಮದ ಪರಿಣಾಮಗಳು: ಅಭಾವ ಪರಿಸ್ಥಿತಿಯ ಕಾಲದಲ್ಲಿ ಸಂಭವಿಸುವ ಮರಣಗಳು ಕ್ಷಾಮದ ನೇರ ಫಲ ಹೌದೇ ಅಲ್ಲವೇ ಎಂಬುದು ಆಗಾಗ್ಗೆ ಭಾರತದಲ್ಲಿ ವಾದಕ್ಕೆ ಒಳಗಾಗಿರುವ ವಿಚಾರ. ತಲಾ 1,600 ಕೆಲೊರಿಗಳಷ್ಟು ಮಾತ್ರ ಆಹಾರ ಲಭ್ಯವಿದ್ದಾಗ ಜನರ ಮೇಲಾಗುವ ಪರಿಣಾಮವೇನೆಂಬುದನ್ನು ಪರಿಶೀಲಿಸಲಾಗಿದೆ. ಆರಂಭದಲ್ಲಿ ಅವರು ಶೀಘ್ರವಾಗಿ ತೂಕ ಕಳೆದುಕೊಳ್ಳುತ್ತಾರೆ. ಎರಡು-ಮೂರು ತಿಂಗಳುಗಳಲ್ಲಿ ಸೇ.25 ರಷ್ಟು ತೂಕ ಇಳಿಯಬಹುದು. ಆ ಮಟ್ಟದಲ್ಲಿ ಸಮತೋಲ ಏರ್ಪಟ್ಟು, ಅನಂತರವೂ ಅನೇಕ ತಿಂಗಳುಗಳ ಕಾಲ ಬದುಕುವುದು ಸಾಧ್ಯ. ವೈದ್ಯ ಮತ್ತು ನೈರ್ಮಲ್ಯ ಇದ್ದ ಪಕ್ಷದಲ್ಲಿ ಪ್ರಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಸಾವಿನ ದರ ಇರುವುದಿಲ್ಲ. ಕೆಲೊರಿಗಳ ಅಂಶ ಇನ್ನೂ ಕಡಿಮೆಯಾದರೆ ತೂಕ ಬೇಗ ಇಳಿದು ಉಪವಾಸ ಮರಣಗಳ ಸಂಖ್ಯೆ ಹೆಚ್ಚುತ್ತದೆ. ಹೆಂಗಸರಿಗೆ, ಮಕ್ಕಳಿಗೆ, ಕಡಿಮೆ ಗಾತ್ರದವರಿಗೆ ಧಾರಣ ಶಕ್ತಿ ಸ್ವಲ್ಪ ಹೆಚ್ಚು. ಉಪವಾಸ ಮಾಡುತ್ತಿರುವಾಗ ಶಕ್ತಿಯನ್ನು ಉಳಿಸಿಕೊಳ್ಳಲು ದೇಹ ಸೂಕ್ತ ಹೊಂದಾವಣೆ ಮಾಡಿಕೊಳ್ಳುತ್ತದೆ. ತೂಕ ಕಡಿಮೆಯಾದಾಗ ಅಂಗಾಂಶಗಳ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಅನಾವಶ್ಯಕವೆನಿಸಿದ ಸ್ನಾಯುಚಲನೆ ನಿಲ್ಲುವಂತೆ ಜಡತೆ ತಲೆದೋರುತ್ತದೆ. ಆಹಾರಬೇಕೆಂಬ ತವಕ ಹೆಚ್ಚುತ್ತದೆ. ನೈತಿಕಮಟ್ಟ ಇಳಿಯುವುದುಂಟು. ಕ್ಷಾಮ ಕಾಲದಲ್ಲಿ ಕೊಲೆ, ನರಭಕ್ಷಣಗಳಾಗಿರುವ ವರದಿಗಳಿವೆ. ಜಲೋದರ, ಅತಿಬೇಧಿ ಸಾಮಾನ್ಯ. ಇವು ಮರಣಕಾರಕ. ನಾಡಿಯ ಮಿಡಿತ ನಿಧಾನವಾಗುತ್ತದೆ. ರಕ್ತದ ಒತ್ತಡ ತಗ್ಗುತ್ತದೆ. ವಾಸಿಯಾಗದ ಮಟ್ಟಿಗೆ ಹೃದಯ ಕ್ಷೀಣಿಸಬಹುದು. ರಕ್ತಕ್ಷಯ ಸಾಮಾನ್ಯ ಆದರೆ ಇದು ಸಾಮಾನ್ಯವಾಗಿ ತೀವ್ರವಾಗುವುದಿಲ್ಲ. ಸ್ತ್ರೀಪುರುಷರಲ್ಲಿ ಕಾಮ ಪ್ರೇರಣೆ ಕಡಿಮೆಯಾಗುತ್ತದೆ. ಕಾಲರಾ, ಮಲೇರಿಯ, ಹೇನಿನಿಂದ ಹಬ್ಬುವ ಟೈಫಸ್‍ಜ್ವರ, ಉರಿಶೀತ, ಕ್ಷಯ ಮುಂತಾದ ಸಾಂಕ್ರಾಮಿಕ ರೋಗಗಳು ಹಬ್ಬಿ ಅನೇಕರನ್ನು ಆಹುತಿ ತೆಗೆದುಕೊಳ್ಳುತ್ತವೆ. ಕೃಷಿಪ್ರಧಾನವಾದ ಸಮಾಜಗಳಲ್ಲಿ ಹಳ್ಳಿಗಳಲ್ಲಿ ಕುಟುಂಬ ಜೀವನ ಛಿದ್ರವಾಗುತ್ತದೆ. ಹಲವರು ಮನೆ ತೊರೆದು ಆಹಾರಕ್ಕಾಗಿ ಬೆಂತರನಂತೆ ಅಲೆದಾಡುತ್ತಾರೆ. ಅನೀತಿ, ಅಪರಾಧ ಹೆಚ್ಚಬಹುದು.	 
(ಎಚ್.ಸಿ.ಕೆ.)